ಪಿಳ್ಳೈ, ದೇಶಿಕ ವಿನಾಯಗಂ
1876-1954. ಪ್ರಸಿದ್ಧ ತಮಿಳು ಕವಿ. ಜನ ಇವರನ್ನು ಪ್ರೀತಿಯಿಂದ ಕವಿಮಣಿ ಎಂದೂ ಕರೆಯುತ್ತಿದ್ದರು. ಹುಟ್ಟಿದ್ದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ತೇರೂರಿನಲ್ಲಿ. ತಂದೆ ಶಿವದಾಣು ಪಿಳ್ಳೈ ; ತಾಯಿ ಆದಿಲಕ್ಷ್ಮಿ ಅಮ್ಮೈ. ಪಿಳ್ಳೈ ಆರಂಭದಲ್ಲಿ ತೇರೂರಿನಲ್ಲಿಯೂ ಅನಂತರ ಕೊಟ್ಟಾರಿನಲ್ಲಿಯೂ ಓದಿ ಅಧ್ಯಾಪಕ ಶಿಕ್ಷಣವನ್ನು ತಿರುವನಂತಪುರದಲ್ಲಿ ಪಡೆದರು. ಇವರ ಗುರು ತೇರೂರ್ ತಿರುವಾವಡುದೊರೈ ಮಠದ ಸ್ವಾಮಿಯಾಗಿದ್ದ ಶ್ರೀಕಾಂತಲಿಂಗ ತಂಬಿರಾನ್. ಪಿಳ್ಳೈ 36 ವರ್ಷ (1895-1931) ತಮಿಳು ಪ್ರಾಧ್ಯಾಪಕರಾಗಿ ಕೊಟ್ಟಾರ್, ನಾಗರಕೋಯಿಲ್, ತಿರುವನಂತಪುರಮ್ ಮುಂತಾದ ಎಡೆಗಳಲ್ಲಿ ಸೇವೆ ಸಲ್ಲಿಸಿದರು. ಈ ಶತಮಾನದ ಪ್ರಸಿದ್ಧ ಕವಿಗಳಾದ ಇವರು ಶಾಸನಗಳನ್ನು ಕುರಿತು ಸಂಶೋಧನೆ ಮಾಡಿದರಲ್ಲದೆ ಇಂಗ್ಲಿಷಿನಲ್ಲಿ ಅನೇಕ ಪ್ರಬಂಧಗಳನ್ನೂ ಬರೆದರು.

ಕೆಲಸದಿಂದ ನಿವೃತ್ತರಾದ ಮೇಲೆ ಪಿಳ್ಳೈ ತಮ್ಮ ಹೆಂಡತಿಯ ಊರಾದ ಪುತ್ತೇರಿಯಲ್ಲಿ ನೆಲೆಸಿದರು. ಇದು ನಾಗರಕೋಯಿಲ್‍ಗೆ ಸಮೀಪದಲ್ಲಿದೆ. ಆದ ಕಾರಣ ಇವರನ್ನು ಪುತ್ತೇರಿ ಕವಿಯೆಂದು ಕರೆಯುವರು. ಪುತ್ತೇರಿಯ ನಿಸರ್ಗ ಸೌಂದರ್ಯವನ್ನು ಕವಿ ಮಲರುಮ್ ಮಾಲೈಯುಮ್ (ಹೂಗಳೂ ಹಾರವೂ) ಎಂಬ ಗ್ರಂಥದಲ್ಲಿ ಅಂದವಾಗಿ ಚಿತ್ರಿಸಿದ್ದಾರೆ. 

ಕವಿಮಣಿಯವರ ಕವಿತೆಗಳು ಸುಲಭವಾಗಿ ಅರ್ಥವಾಗುವಂಥವು. ಹಳೆಯ ಕಾಲದ ಸಂಸ್ಕøತಿಯೂ ನವೀನ ಕಾಲದ ವಿಚಾರಶೀಲತೆಯೂ ಇವರ ಹಾಡುಗಳಲ್ಲಿ ರಮ್ಯವಾಗಿ ಮೂಡಿಬಂದಿದೆ.

ಆಸಿಯ ಜ್ಯೋತಿ, ಉಮರ್ ಕಯ್ಯಾಮ್ ಪಾಡಲ್‍ಗಳೆ, ನಾಂಚಿಲ್‍ನಾಟ್ಟು ಮರುಮಕ್ಕಳ್ ವ¿Âಮಾನಮಿಯಮ್, ದೇವಿಯನ್ ಕೀರ್ತನೈಗಳ್, ಕು¿ಂದೈ ಸೆಲವಮ್-ಮುಂತಾದವು ಇವರ ಪ್ರಸಿದ್ಧವಾದ ಪದ್ಯಗ್ರಂಥಗಳು. ಕವಿಮಣಿಯನ್ ಉರೈಮಣಿಗಳ್ ಎಂಬುದು ಇವರ ಪ್ರಸಿದ್ಧ ಗದ್ಯಗ್ರಂಥ. ಕಾಂದಳೂರ್ ಸಾಲ್ಪೆ ಎಂಬುದು ಶಾಸನ ಸಂಶೋಧನೆಯನ್ನು ಕುರಿತ ಇಂಗ್ಲಿಷ್ ಗ್ರಂಥ. ಇವರು ಮಕ್ಕಳಿಗಾಗಿ ರಮ್ಯವಾದ ಹಾಡುಗಳನ್ನೂ ಬರೆದಿದ್ದಾರೆ. ಕವಿಮಣಿ ತೀರಿಕೊಂಡಿದ್ದು 1954 ನೆಯ ವರ್ಷ ಸೆಪ್ಟೆಂಬರ್ 28 ರಂದು.
(ವಿ.ಪಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ